ಕೇಡಿನ ಫಲ

Deer @pexels.com
Reading Time: 2 minutes

ಕೇಡಿನ ಫಲ

ಕುಂಜಾರು ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಹುಲುಸಾಗಿ ಹಸಿರು ಹುಲ್ಲು ಬೆಳೆದಿತ್ತು.

ಮುಸ್ಸಂಜೆಯ ಒಂದು ದಿನ, ಎಲ್ಲಿಂದಲೋ ಬಂದ ಹಲವಾರು ಜಿಂಕೆಗಳು ಆನಂದದಿಂದ ಹುಲ್ಲು ಮೇಯುತ್ತಿದ್ದವು.ಆಗ ಅವುಗಳ ಸನೀಹದಲ್ಲಿದ್ದ ಅತ್ತೀ ಮರದ ಒಣಗಿದ ದೊಡ್ಡ ಕೊಂಬೆ”ಧೋಪ್”ಎಂದು ಶಬ್ದ ಮಾಡುತ್ತ ನೆಲಕ್ಕೆ ಬಿದ್ದಿತು.

ಅಷ್ಟಕ್ಕೇ ಹೆದರಿದ ಜಿಂಕೆಗಳು ಪ್ರಾಣ ಭಯದಿಂದ ದಿಕ್ಕಾಪಾಲಾಗಿ ಓಡತೊಡಗಿದವು.ಹೀಗೆ ಓಡುತ್ತಿರುವಾಗ ಆ ಜಿಂಕೆಗಳ  ಗುಂಪಿಗೆ ಸೇರಿದ ಪುಟ್ಟ ಮರಿ ದಾರಿ ತಪ್ಪಿ ಪಕ್ಕದ ಗ್ರಾಮದೊಳಗೆ ನುಗ್ಗಿ ಬರತೊಡಗಿತು.ಅದೇ ವೇಳೆ

ಬೀದಿಯಲ್ಲಿ ಮಲಗಿದ್ದ ಎರಡು ದಷ್ಟ ಪುಷ್ಟ ನಾಯಿಗಳಿಗೆ ಇದರ ವಾಸನೆ ಬಡಿಯಿತು.ತಕ್ಷಣವೇ ಅವು ಎದ್ದು ನಾ… ಮುಂದು ತಾ.. ಮುಂದು ಎಂದು ಅದನ್ನು ಹಿಡಿಯಲು ಬೆನ್ನಟ್ಟಿ ಓಡತೊಡಗಿದವು.ಭಯಗೊಂಡ ಜಿಂಕೆ ಮರಿ ತನ್ನ ಪ್ರಾಣ ಉಳಿಸಿಕೊಳ್ಳಲು ಒಂದೇ ಸಮ ಓಡುತ್ತಿರುವಾಗ ಅದರ ಕಣ್ಣಿಗೆ ಆ ಊರಿನ ಅಗಸನ ಮನೆಯ ಗೋಡೆ ಪಕ್ಕ ನಿಂತಿದ್ದ ಕತ್ತೆ ಕಂಡಿತು.

ಅದರಿಂದ ತನಗೆ ಅಪಾಯ ಏನಿಲ್ಲ ಎಂದರಿತ ಆ ಜಿಂಕೆ ಮರಿ, ಕತ್ತೆಯ ಎದುರು ಬಂದು ನಡುಗುತ್ತ ಕುಳಿತಿತು.ಅದರ ಕಣ್ಣಲ್ಲಿ ದು:ಖ ದಿಂದ ಒಂದೇ ಸಮ ನೀರು ಸುರಿಯುತ್ತಿತ್ತು.ಅದರ ಹಾವ-ಭಾವ ಕಂಡ ಕತ್ತೆಗೆ ಇದು ಅಪಾಯದಲ್ಲಿದೆ, ತನಗೆ ರಕ್ಷಣೆ ಕೊಡು ಎಂದು ಬೇಡುತ್ತಿದೆ ಎಂದರಿತು,ಆ ವರೆಗೂ ನಿಂತಿದ್ದ ಕತ್ತೆ ಆ ಮರಿಯ ಮುಂದೆ ಕುಳಿತು ತನ್ನ ಮುಂದಿನ ಎರಡೂ ಕಾಲುಗಳಿಂದ ಅದರ ಬೆನ್ನು ಸವರುತ್ತ “ನಾನಿದ್ದೇನೆ…ಭಯ “ಎಂದು ಸಮಾಧಾನ ಮಾಡತೊಡಗಿತು.

ಅಷ್ಟರಲ್ಲಿ ಓಡಿಬರುತ್ತಿದ ಆ ನಾಯಿಗಳು ಸ್ವಲ್ಪ ದೂರದಲ್ಲೇ ನಿಂತು,”ಅಯ್ಯೋ ಹೋಗಿ ಹೋಗಿ ಈ ಜಿಂಕೆ ಮರಿ ಕತ್ತೆಯ ರಕ್ಷಣೆ ಪಡೆದಿದೆಯಲ್ಲಾ…”ಎಂದು ತಮ್ಮ ತಮ್ಮೊಳಗೆ ವ್ಯಂಗ್ಯ ದಿಂದ ಮಾತನಾಡಲಾರಂಭಿಸಿದವು.ಆ ನಂತರ ಅದರಲ್ಲಿಯ ಒಂದು ನಾಯಿ ಮತ್ತೊಂದು ನಾಯಿಗೆ”ಮಿತ್ರಾ…ಈ ಜಿಂಕೆ ಮರಿ ಯನ್ನು ಕತ್ತೆಯಿಂದ ಬಿಡಿಸಿ ಕಬಳಿಸಲು ನನ್ನ ಬಳಿ ಒಂದು ಉಪಾಯ ಇದೆ..”

ಎಂದಾಗ ಕುತೂಹಲದಿಂದ ಇನ್ನೊಂದು ನಾಯಿ ಜೊಲ್ಲು ಸುರಿಸುತ್ತ-“ಅದೇನು ಬೇಗ ಹೇಳು ಎಂದಿತು. .ಮುಂದುವರೆದ ಆ ನಾಯಿ”ಏನಿಲ್ಲ …ಆ ಕತ್ತೆಯ ಎದುರು ಸ್ವಲ್ಪ ಒಳ್ಳೆಯ ಆಹಾರ ತಂದಿಡೋಣ ಅದರ ಆಸೆಗೆ ಜಿಂಕೆ ಮರಿ ಯನ್ನು ಬಿಟ್ಟು ತಿನ್ನಲು ಬರುತ್ತದೆ ಆಗ ನಾವು……..” ಎಂದು ಗಹಗಹಿಸಿ ನಗಲಾರಂಭಿಸಿದವು..ಈ ನಡುವೆ ಅಲ್ಲಿಯ ಕಲ್ಲುಗಳು ಸಂದಿಯೊಳಗಿದ್ದ ಒಂದು ಇಲಿ, ಇವುಗಳು ಮುದ್ದು ಜಿಂಕೆ ಮರಿ ಯನ್ನು ಕಬಳಿಸಲು  ಆಡಿದ ಮಾತುಗಳನ್ನು ಆಲಿಸಿ, ಲಗುಬಗೆಯಿಂದ ಕತ್ತೆಯ ಬಳಿ ಹೋಗಿ ಎಲ್ಲವನ್ನೂ ವಿವರಿಸಿತು.ಇಲಿಯ ಮಾತು ಕೇಳಿದ ಕತ್ತೆ-“ಹಾಂ….

ಹೀಗೋ ಸಮಾಚಾರ? ನನ್ನ ಬಳಿ ಬರ್ಲಿ  ಅವುಗಳಿಗೆ ಸರಿಯಾಗಿ ಬುದ್ಧಿ ಕಲಿಸುವೆ”ಎಂದು ಹೇಳಿ ಸುಮ್ಮನಾಯಿತು.ಕೆಲ ನಿಮಿಷಗಳ ತರುವಾಯ ಎಲ್ಲೇಲ್ಲಿಂದಲೋ ಒಂದಿಷ್ಟು ಒಳ್ಳೆಯ ಆಹಾರ ಪದಾರ್ಥ ಕಲೆಹಾಕಿ ಅದನ್ನು ಒಂದು ಹರಕಲು ಗೋಣಿ ಚೀಲದೊಳಗಿಟ್ಟು,ಕಷ್ಟ ಪಟ್ಟು ಆ ನಾಯಿಗಳು ಎಳೆದು ತಂದು ಕತ್ತೆಯ ಮುಂದೆ

ತಂದಿಟ್ಟವು. ಆಹಾರ ಕಂಡೊಡನೆ ಆ ಕತ್ತೆ ಜಿಂಕೆ ಮರಿ ಯನ್ನು ಬಿಟ್ಟು ಬರಬಹುದೆಂದು ಅಂದಾಜಿಸಿ ಕಾಯುತ್ತ ನಿಂತವು.ಆದರೆ ವಿಚಿತ್ರ ಎಂಬಂತೆ ಕತ್ತೆ,

ನಾಯಿಗಳು ತಂದಿಟ್ಟ ಆಹಾರ ಕಂಡರೂ ತಾನು ಕುಳಿತ ಜಾಗದಿಂದ ಕದಲೇಇಲ್ಲ.

ಆಗ ಈ ಆಸೆಬುರುಕ ನಾಯಿಗಳು ಕತ್ತೆಯ ಎದುರು ಬಂದು”ಅಣ್ಣಾ..ಆಗೋ

ನೋಡು ನಿನಗಾಗಿ ವಿಶೇಷ ಆಹಾರ ತಂದಿದ್ದೇವೆ ರುಚಿ ನೋಡು ಬಾ…”ಎಂದು ವಿನೀತವಾಗಿ ಕೇಳಿಕೊಂಡವು.ಇಲಿಯ ಮೂಲಕ ಇವುಗಳ ಪ್ಲಾನ್ ಅರಿತಿದ್ದ ಕತ್ತೆ

“ಏಯ್..ಹುಚ್ಚಪ್ಪಗಳಾ… ಇದನ್ನು ನನ್ನ ಹಿಂದೆ ತಂದಿಡಿ, ಇಲ್ಲವಾದಲ್ಲಿ ಅದರಲ್ಲಿ

ಈ ಜಿಂಕೆ ಮರಿ ಗೂ ಪಾಲು ಕೊಡಬೇಕಾಗತ್ತೆ…”ಎಂದು ನುಡಿದಾಗ ಕತ್ತೆ ಯ

ಮಾತು ನಿಜವೇನೋ ಎಂದರಿತ ನಾಯಿಗಳು ತಡ ಮಾಡದೆ ತಾವು ತಂದಿದ್ದ ಆಹಾರ ಇರುವ ಗೋಣಿ ಚೀಲವನ್ನು ಪುನಃ ಎಳೆದು ತಂದು ಕತ್ತೆ ಯ ಹಿಂಭಾಗದಲ್ಲಿ ಇಟ್ಟು ಅಲ್ಲಿಯೇ ನಿಂತು ಕಾಯತೊಡಗಿದವು.ಈಗ ನಿಧಾನವಾಗಿ ಎದ್ದು ನಿಂತ ಕತ್ತೆ,

ಸ್ವಲ್ಪ ಸ್ವಲ್ಪ ಹಿಂದೆ ಸರಿಯುತ್ತ ತನ್ನಲ್ಲಿದ್ದ ಬಲ ಬಳಸಿ ನಾಯಿಗಳಿಗೆ ಝಾಡಿಸಿ ಒದ್ದು ಬಿಟ್ಟಿತು. ಅದರ ಒದೆತ ರಭಸಕ್ಕೆ ನಾಯಿಗಳು ಅಲ್ಲಿದ್ದ ಕಲ್ಲಿನ ರಾಶಿಯ ಮೇಲೆ ಬಿದ್ದು ಗಾಯಗೊಂಡು ನರಳತೊಡಗಿದವು.ಅಷ್ಟರಲ್ಲಿ ಕಳೆದುಕೊಂಡ ತನ್ನ ಮರಿಯನ್ನು ಅರಸುತ್ತ ಅಲ್ಲಿಗೆ ಬಂದ ಆ ಜಿಂಕೆ ಮರಿಯ ತಾಯಿಯನ್ನು ಕಂಡ ಕತ್ತೆ, ತನ್ನ ರಕ್ಷಣೆ ಯಲ್ಲಿದ್ದ ಮರಿಯನ್ನು ಅದಕ್ಕೊಪ್ಪಿಸಿ, ತನ್ನ ಜನ್ಮ ಸಾರ್ಥಕ ವಾಯಿತೆಂದು ಸಂತಸಪಡತೊಡಗಿತು.

Leave a Reply