ಆನೆಯ ಮಾತು ಕೇಳದ ಅರಸ

Elephant Photo by Pixabay from Pexels
Reading Time: 2 minutes

“ಆನೆಯ ಮಾತು ಕೇಳದ ಅರಸ”(ಮಕ್ಕಳ ಕಥೆ)

   ವಿಜಯವರ್ಮ ಎಂಬ ಅರಸ ವಜ್ರಪುರಿ ರಾಜ್ಯ ಆಳುತ್ತಿದ್ದ.ಆತ ಪಟ್ಟಕ್ಕೆ ಬಂದಾಗಿನಿಂದ ತನ್ನ ರಾಜ್ಯ ವಿಸ್ತರಿಸುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದ.ಹೀಗಾಗಿ

ಅಕ್ಕ ಪಕ್ಕದ ರಾಜ್ಯಗಳ ಮೇಲೆ ಆಗಾಗ ದಂಡೆತ್ತಿ ಹೋಗುತ್ತಿದ್ದ.ಆ ಒಂದು ಸಂದರ್ಭದಲ್ಲಿ ಅಲ್ಲಿನ ಧನ-ಕನಕಾದಿಗಳನ್ನು ಅಪಾರವಾಗಿ ದೋಚಿ ಸಂಗ್ರಹಿಸಿ ಇಟ್ಟಿದ್ದ.ಇದರಿಂದಾಗಿ ಆತ ತನ್ನ ಸುತ್ತ ಮುತ್ತಲ ಸಾಕಷ್ಟು ಶತ್ರುಗಳ ಕಾಟ ಹೆಚ್ಚಿಸಿಕೊಂಡಿದ್ದ.ಈ ಅರಸನು ಅನ್ಯ ರಾಜ್ಯಗಳ ಮೇಲೆ ದಾಳಿ ನಡೆಸಿ ವಾಪಸ್ ಬರುವಾಗಲೆಲ್ಲ ಹತ್ತಿರದ ಅರಣ್ಯ ಪ್ರದೇಶದಲ್ಲಿ ಒಂದೆರಡು ವಾರ ಉಳಿದು ವಿಶ್ರಾಂತಿ ಪಡೆಯುತ್ತಿದ್ದ.ಸಾಕಷ್ಟು ವಿಶ್ರಾಂತಿ ಪಡೆದ ನಂತರ ಅರಮನೆಗೆ ಹಿಂತಿರುಗಿ ಹೋಗುವ ಸಮಯದಲ್ಲಿ ಆತನ ಕಣ್ಣಿಗೆ ಕಾಣುವ ಯಾವುದೇ ಕ್ರೂರ ಅಥವಾ ಸಾಧು  ಮೃಗವನ್ನು ಸೆರೆಹಿಡಿದು, ಎಳೆದು ತಂದು ಸಲಹುವ ರೂಢಿ ಮಾಡಿಕೊಂಡಿದ್ದ.

        ಹೀಗೆ ಒಂದು ಬಾರಿ,ಈ ಅರಸ ಅರಣ್ಯದಲ್ಲಿ ವಿಶ್ರಾಂತಿ ಪಡೆದು ಅರಮನೆಯತ್ತ ವಾಪಸ್ ಹೋಗುವ ಸಂದರ್ಭದಲ್ಲಿ ಆತನ ಕಣ್ಣಿಗೆ ಬಂಡೆ ಗಾತ್ರದ

ದೊಡ್ಡ ಆನೆ ಕಂಡಿತು.ಅದು ತನ್ನ ಪಾಡಿಗೆ ತಾನು ಮರದ ನೆರಳಿನಲ್ಲಿ ನಿಂತು ಹುಲ್ಲು

ಮೇಯುತ್ತಿತ್ತು..ಆಗ ಅರಸ”ಸೈನಿಕರೇ… ಹೇಗಾದರೂ ಸರಿ ಈ ಆನೆಯನ್ನು ಸೆರೆ ಹಿಡಿದು ಎಳೆದು ತಿನ್ನಿ..”ಎಂದು ಆದೇಶಿಸಿದ.ಅರಸನ ಆದೇಶದಂತೆ ಅಲ್ಲಿದ್ದ ಒಂದಿಷ್ಟು ಸೈನಿಕರು ಆ ಆನೆಯನ್ನು ಸೆರೆಹಿಡಿಯಲು ಮುಂದಾದಾಗ ಅದು ಸಾಕಷ್ಟು ಪ್ರತಿಭಟನೆ ಮಾಡಲಾರಂಭಿಸಿತು.ಪುನ: ಅರಸನ ಕಡೆಯಿಂದ”ಬೇಗ.. ಬೇಗ..”ಎಂಬ ಆದೇಶ ಬರುತ್ತಿದ್ದಂತೆ ಸೈನಿಕರು ಆ ಆನೆಗೆ ಇನ್ನಿಲ್ಲದಂತೆ ಹಿಂಸೆ ನೀಡಿ

ಅಂತೂ ಅದರ ಕಾಲುಗಳಿಗೆ ಸರಪಳಿ ಬಿಗಿದರು.ಅನಿರೀಕ್ಷಿತವಾಗಿ ಮನುಷ್ಯರಿಂದ ನೋವು ತಿಂದ ಆನೆ ,ಅಲ್ಲಿಗೆ ಬಂದ ಅರಸನಿಗೆ ವಿನೀತನಾಗಿ-“ಮಹಾರಾಜಾ.. ನಾನೇನು ನಿಮಗೆ ಅನ್ಯಾಯ ಮಾಡಿದ್ದೆ? ನನ್ನ ಪಾಡಿಗೆ ನಾನು ಇದ್ದೆ, ಆದರೆ ಈ ರೀತಿ ನನ್ನನ್ನು ಹಿಂಸಿಸಿ ಎಳೆದೊಯ್ಯುವುದು  ಸರಿ ಅಲ್ಲ.ಆ ಭಗವಂತ ಕೂಡ ನಿಮ್ಮ ಕಾರ್ಯ ಮೆಚ್ಚುವುದಿಲ್ಲ,.. ದಯವಿಟ್ಟು ನನ್ನನ್ನು ಬಿಡುಗಡೆ ಗೊಳಿಸಲು ಆದೇಶಿಸಿ”

ಎಂದು ಕಣ್ಣೀರಿಡುತ್ತ ಪರಿ ಪರಿಯಾಗಿ ಕೇಳಿತು.ಆದರೆ ಈ ಅರಸ ಅದರ ಯಾವುದೇ ಮಾತು ಕೇಳಿಸಿಕೊಳ್ಳದವನಂತೆ ತನ್ನದೇ ಧಾಟಿಯಲ್ಲಿ ಮತ್ತೆ ಸೈನಿಕರಿಗೆ

“ಹೂಂ.. ಯಾಕೆ ತಡಮಾಡುತ್ತಿದ್ದೀರಿ.. ಎಳೆದು ತಿನ್ನಿ..”ಎನ್ನುತ್ತ ಕುದುರೆ ಏರಿ ಹೊರಟು ಹೋದ.ಪಾಪ ಆ ತನಕ ಸ್ವತಂತ್ರ ದಿಂದ ಓಡಾಡಿಕೊಂಡಿದ್ದ ಆನೆ ತನ್ನ ನಾಲ್ಕೂ ಕಾಲುಗಳಿಗೆ ಸರಪಳಿ ಬಿಡಿಸಿಕೊಂಡು ವ್ಯಥೆ ಪಡುತ್ತ ಮನದಲ್ಲೇ”ಇನ್ನು

ನಾನು ಪ್ರತಿಭಟಿಸಲು ಮುಂದಾದರೆ,ಇಲ್ಲಿನ ಸೈನಿಕರ ತಮ್ಮಬಳಿ ಇರುವ ಹರಿತವಾದ ಆಯುಧದಿಂದ ತನ್ನನ್ನು ಮತ್ತಷ್ಟು ಹಿಂಸೆ ಮಾಡುವುದು ಗ್ಯಾರಂಟಿ…ನನಗೂ ಸಮಯ ಬಾರದೇ ಇರಲ್ಲ,ಆಗ ಇವರಿಗೆ ಪಕ್ಕಾ ಪಾಠ ಕಲಿಸುವೆ”ಎಂದುಕೊಳ್ಳುತ್ತ  ಸೈನಿಕರನ್ನು ಹಿಂಬಾಲಿಸತೊಡಗಿತು.

      ಅರಸನ ಆದೇಶದಂತೆ  ಸೈನಿಕರು ಆ ಆನೆಯನ್ನು ತಮ್ಮ ನಾಡಿಗೆ ತಂದು

ಅರಮನೆಯಿಂದ ಅನತಿ ದೂರ ಇರುವಂತಹ ಗಿಡ-ಮರಗಳು ಒತ್ತಾಗಿ ಇರುವ ಪ್ರದೇಶದಲ್ಲಿ ಕಟ್ಟಿಹಾಕಿದರು. ಮರುದಿನದಿಂದ ಅದನ್ನು ಪಳಗಿಸಲು ವಿಧ-ವಿಧ ವಾದ ಆಹಾರ ತಂದು ಅದರ ಎದುರಿಗಿಟ್ಟರೂ ಆನೆ ಅತ್ತ ಮೂಸಲೂ ಇಲ್ಲ.ಮೊದಲೇ ರೋಷಗೊಂಡಿದ್ದ ಅದು ಕೆಲವು ತಾಸುಗಳಿಂದ ಆಹಾರ ಇಲ್ಲದೇ ಇನ್ನಷ್ಟು ಕೆರಳಿ ನಿಂತಿತ್ತು.ಆ ರಾತ್ರಿ ಇದ್ದಕ್ಕಿದ್ದಂತೆ ಅದರ ಎದುರಿಗಿದ್ದ ಒಂದು ದೊಡ್ಡ ಒಣಗಿದ ಮರಕ್ಕೆ ಬೆಂಕಿ ಹತ್ತಿಕೊಂಡಿತು.ಅದನ್ನು ಕಂಡ ಅಲ್ಲಿದ್ದ ಐದಾರು ಸೈನಿಕರು ಬೆಂಕಿ ನಂದಿಸಲು ಶ್ರಮ ಪಡತೊಡಗಿದರು.ಆಗ ಜೋರಾಗಿ ಗಾಳಿ ಬೀಸುತ್ತಿದ್ದರಿಂದ ಬೆಂಕಿ ಆರಿಸುವುದು ಸುಲಭವಾಗಿರಲಿಲ್ಲ.ಧಗ-ಧಗನೆ ಉರಿಯುತ್ತಿದ್ದ ಮರದ ಕೆಲವು ಕೊಂಬೆಗಳು ಆನೆಯ ಬಳಿ ಬಂದು ಬೀಳಲಾರಂಭಿಸಿದಾಗ, ಅದು ಮೆಲ್ಲಗೆ ಉರಿಯುತ್ತಿದ್ದ ಕೊಂಬೆಯ ಒಂದು ತುದಿಯನ್ನು ಸೊಂಡಿಲಿನಲಿ ಹಿಡಿದು ತನ್ನ

ಬಲಪ್ರಯೋಗಿಸಿ ಎಡದಿಕ್ಕಿನತ್ತ ಎಸೆಯಲಾರಂಭಿಸಿತು. ಉರಿಯುತ್ತಿದ್ದ ಒಣ ಮರದ ಕೊಂಬೆಗಳು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ ಅರಸನ ಶತ್ರುಗಳ ಬಿಡಾರದ ಮೇಲೆ ಬಿದ್ದು ಅಲ್ಲೆಲ್ಲಾ ಬೆಂಕಿ ಹಬ್ಬಿತು.ಇದನ್ನು ನೋಡಿ ಗಾಬರಿಗೊಂಡ ಶತ್ರು ಪಕ್ಷದ ಸೈನಿಕರು ತಕ್ಷಣವೇ ತಮ್ಮ ರಾಜನ ಬಳಿ ಹೋಗಿ ವಿಜಯವರ್ಮ ಅರಸ ಬೆಂಕಿ ದಾಳಿಮಾಡುತ್ತಿದ್ದಾನೆ ಎಂದು ವರದಿ ಒಪ್ಪಿಸಿದರು.ಜಾಗ್ರತಗೊಂಡ ಆ ರಾಜ  ತಡಮಾಡದೇ ತನ್ನಲ್ಲಿನ ಸಮಸ್ತ ಸೈನಿಕರೊಡಗೂಡಿ ವಜ್ರಪುರಿ ರಾಜ್ಯದ ಮೇಲೆ ದಂಡೆತ್ತಿ ಬಂದು ಧ್ವಂಸ ಗೊಳಿಸಿ,ಆ ನಾಡಿನ ಅರಸು ಕೂಡಿಟ್ಟ ಎಲ್ಲ ಧನ ಕನಕಾದಿಗಳನ್ನು ದೋಚಿ ಹೊರಟು ಹೋದ.ಏಕಾಏಕಿ ಶತ್ರುಗಳ ದಾಳಿಗೆ ಬಲಿಯಾಗಿ  ತನ್ನಲ್ಲಿ ಇರುವುದನ್ನೆಲ್ಲ ಕಳೆದು ಕೊಂಡ ಬಳಿಕ ವಿಜಯವರ್ಮ ಅರಸನಿಗೆ”ಛೇ… ಅಂದು ತಾನು ಆ ಆನೆಯ ಮಾತು ಕಡೆಗಣಿಸಬಾರದಿತ್ತು”ಎಂದು ಪಶ್ಚಾತ್ತಾಪ ಪಡುತ್ತ ದು:ಖಿಸತೊಡಗಿದ.ಆದರೆ ಕಾಲ ಮಿಂಚಿಹೋಗಿತ್ತು.

Leave a Reply