ಪಾರು ಮತ್ತು ಪಾರಿವಾಳ

Pigeon Photo by Tim Mossholder from Pexels
Reading Time: 2 minutes

 ಪಾರು ಮತ್ತು ಪಾರಿವಾಳ


     ಆರನೇಯ ತರಗತಿಯಲ್ಲಿ ಓದುತ್ತಿದ್ದ ಪಾರ್ವತಿಗೆ, ಎಲ್ಲರೂ ಪ್ರೀತಿಯಿಂದ “ಪಾರೂ-ಪಾರೂ”ಎಂದೇ ಕೂಗುತ್ತಿದ್ದರು.ಆಟ-ಪಾಠಗಳಲ್ಲಿ ಈ ಪಾರೂ  ಯಾವಾಗಲೂ ಮುಂದು.ನೆರೆಮನೆಯಲ್ಲಿದ್ದ ಅದೇ ವಯಸ್ಸಿನ ಶಾರದ ಅವಳ ಕ್ಲಾಸ್ ಮೇಟ್,ಜೋತಗೆ ಆಪ್ತ ಗೆಳತಿ ಕೂಡ ಆಗಿದ್ದಳು.ಇಬ್ಬರೂ ನಿತ್ಯ ಜೊತೆ ಜೊತೆಗೆ ಶಾಲೆಗೆ ಹೋಗುವುದು, ಬರುವುದು ಬಂದ ಮೇಲೆ ಅಂದಿನ ಹೋಮ್ ವರ್ಕ್ ಪೂರೈಸಿ ಆಟ ಆಡುತ್ತಿದ್ದರು. 

ಹೀಗೆ ಒಂದು ದಿನ,ಈ ಇಬ್ಬರೂ ಗೆಳತಿಯರು  ಶಾಲೆ ಪೂರೈಸಿ ಮನೆಗೆ ವಾಪಸ್ ಬರುತ್ತಿದ್ದರು.ಆಗ ದಾರಿಯ ಒಂದು ಮರದ ಕೆಳಗೆ ಅದೇ ತಾನೇ ತನ್ನ ರೆಕ್ಕೆಗೆ ಏಟು ಮಾಡಿಕೊಂಡ ಪಾರಿವಾಳವೊಂದು ನರಳುತ್ತ ಬಿದ್ದಿರುವುದನ್ನು ಪಾರು ಕಂಡಳು.

“ಛೇ.. ಅಯ್ಯೋ ಪಾಪ..”ಎಂದು ಮರುಗಿ ತನ್ನ ಬ್ಯಾಗ್ ನ್ನು ಶಾರದಳಿಗೆ ಕೊಟ್ಟು

ಆ ಪಾರಿವಾಳವನ್ನು ಮೆಲ್ಲಗೆ ಎತ್ತಿಕೊಂಡು ಮನೆಗೆ ಬಂದಳು.ಅಮ್ಮನಿಗೆ ವಿಷಯ ತಿಳಿಸಿ, ಅದಕ್ಕೆ ಪ್ರ ಪ್ರಥಮವಾಗಿ ನೀರು-ಆಹಾರ ಒದಗಿಸಿ ಉಪಚಾರ ಮಾಡಿದಳು.ಆ ದಿನ ರಾತ್ರಿ, ತಾನು ಮಲಗುವ ಕೋಣೆಯ ಮೂಲೆಯಲ್ಲೇ ಅದನ್ನು ಇರಿಸಿಕೊಂಡಳು.ಅಷ್ಟೇ ಅಲ್ಲ ,ಮಲಗಿದವಳು ಆಗಾಗ ಎದ್ದೆದ್ದು ಅದರ ಬಳಿ ಬಂದು ತನ್ನ ಮುದ್ದು ಮಾತಿನಿಂದ”ಏನೂ ಆಗಲ್ಲ ಪುಟ್ಟಾ..ಬೇಗ ವಾಸಿ ಆಗುತ್ತೆ..ಮಲಗು” ಎಂದು ಮೆಲ್ಲಗೆ ಅದರ ತಲೆ ಸವರುತ್ತಿದ್ದಳು.   

  ಕಾಲ ಕಾಲಕ್ಕೆ ನೀರು, ಆಹಾರ, ಉಪಚಾರ, ಪ್ರೀತಿ ಪಡೆದ ಆ ಪಾರಿವಾಳ ಎರಡು ದಿನಗಳಲ್ಲಿಯೇ ಚೇತರಿಸಿಕೊಂಡು,ಮನೆಯ ತುಂಬ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡತೊಡಗಿತು.ಪಾರುವಿಗಂತೂ ಆ  ನೋಟ ಕಂಡು ಖುಷಿಯೋ ಖುಷಿ.

ಪಾರು ಶಾಲೆಗೆ ಹೋದರೂ ಕೂಡ,ಅವಳ ಮನಸ್ಸೆಲ್ಲ ಮನೆಯಲ್ಲಿದ್ದ ಪಾರಿವಾಳದ

ಮೇಲೆ ಇರುತ್ತಿತ್ತು.ಶಾಲೆ ಅವಧಿ ಮುಗಿದ ನಂತರ ಎಲ್ಲಿಯೂ ಸಮಯ ವೇಸ್ಟ ಮಾಡದೆಯೇ ಸೀದಾ ಮನೆಗೆ ಓಡೋಡಿ ಬಂದು ಮುದ್ದು ಪಾರಿವಾಳದೊಂದಿಗೆಮನ ದಣಿಯುವಂತೆ ಆಡಿ ಸುಖದ ನಿದ್ರೆಗೆ ಜಾರುತ್ತಿದ್ದಳು.ಈಗ ಸಂಪೂರ್ಣ ಆರೋಗ್ಯ ಹೊಂದಿದ ಪಾರಿವಾಳ ಪಾರುವಿನ ಮನೆಯ ಒಳಕ್ಕೂ,ಹೊರಗೂ ಆರಾಮಾಗಿ ಓಡಾಡತೊಡಗಿತು. 

ಈ ನಡುವೆ ಪಾರುಳ ವಾರ್ಷಿಕ ಪರೀಕ್ಷೆ ಹತ್ತಿರ ಬಂದಿದ್ದರಿಂದ, ಅವಳು ಪಾರಿವಾಳದೊಂದಿಗೆ ಆಡುವುದನ್ನು ಕಡಿಮೆ ಮಾಡಿ,ಓದುವುದರ ಕಡೆ ಗಮನ ನೀಡಬೇಕೆಂದು ಅಪ್ಪ-ಅಮ್ಮ ಪದೇ ಪದೇ ಹೇಳಿದರೂ, ಆಕೆ ಮಾತ್ರ ಅದರೊಂದಿಗೆ ಆಡುವುದನ್ನು ಕಡಿಮೆ ಮಾಡಲಿಲ್ಲ.ಇದು ಹೀಗೆ ಮುಂದುವರೆದರೆ, ತಮ್ಮ ಮಗಳು ಪರೀಕ್ಷೆಗೆ ಓದಿ ತಯಾರಾಗಲ್ಲ ಎಂಬ ಆತಂಕದಿಂದ ಅವಳ ತಂದೆ ಒಂದು ದಿನ ಸಂಜೆ ಆ ಪಾರಿವಾಳವನ್ನು ಎತ್ತಿ ಕೊಂಡು ಹೋಗಿ ಮನೆಯ ಹತ್ತಿರದ ಮರದ  ಬಳಿ ಬಿಟ್ಟು ಬಂದಿದ್ದ.ಈ ವಿಷಯ ಪಾರುವಿಗೆ ಗೊತ್ತಾಗಿರಲಿಲ್ಲ.ಅದು ತನ್ನ ಮನೆಗೆ ಬಂದಾಗಿನಿಂದ ಪ್ರತಿ ಗಂಟೆಗೊಮ್ಮೆ ಅದರ ದರುಶನ ಪಡೆದು ಆಟವಾಡುತ್ತಾ

ಹರ್ಷಿತಳಾಗಿದ್ದವಳಿಗೆ, ಪಾರಿವಾಳ ಕಾಣದಿದ್ದಾಗ ಕಣ್ಣೀರಿಡುತ್ತ ದು:ಖಿತಳಾದಳು.

ಅದೇ ಯೋಚನೆಯಲ್ಲಿ ಅವಳ ಆಹಾರ ಸೇವನೆ, ನಿದ್ರೆ  ಮೊದಲಿಗಿಂತ ಕಡಿಮೆಆಯಿತು.ಇದರಿಂದ ಅಶಕ್ತತೆ ಉಂಟಾಗಿ ಜ್ವರವೂ ಬಂದಿತು.ಪಾರು ಮಲಗಿದಾಗಲೆಲ್ಲ”ಪಾರಿವಾಳ-ಪಾರಿವಾಳ..ಎಲ್ಹೋಯ್ತು..”ಎಂದು ಕನವರಿಸತೊಡಗಿದಳು.ಇವಳ ಸ್ಥಿತಿ ಕಂಡ ಪೋಷಕರು ಗಾಬರಿಗೊಂಡು ಪರಿಚಯಸ್ಥರೊಂದಿಗೆ ಚರ್ಚಿಸತೊಡಗಿದರು.ಕಾಕತಾಳಿ ಎಂಬಂತೆ ಮರುದಿನ ಬೆಳಿಗ್ಗೆ ಪಾರು ಮನೆಯ ಅಂಗಳದಲ್ಲಿ ಅದೇ ಪಾರಿವಾಳ ಬಂದು ಕುಳಿತು”ನನಗೇನಾಗಿಲ್ಲಾ …ಪಾರೂ, ನಾನು ಚೆನ್ನಾಗಿದ್ದೇನೆ.. ನೀನು ಬೇಗ ಹುಷಾರಾಗಿರು”ಎನ್ನುವ ರೀತಿ ಒಂದೇ ಸಮ “ಗುಟುರ್–ಗುಟುರ್”ಎಂದು  ಕೂಗತೊಡಗಿತು.ಆ ಪಾರಿವಾಳದ ಶಬ್ದ ಆರಂಭಿಸಿದ್ದೇ ತಡ, ಹಾಸಿಗೆ ಮೇಲೆ ಮಲಗಿದ್ದ ಪಾರು, ಓಡೋಡಿ ಬಂದು ಅದನ್ನು ಎತ್ತಿಕೊಂಡು”ಎಲ್ಲಿ ಹೋಗಿದ್ದೀ..

ನನಗೆಷ್ಟು ಬೇಜಾರಾಗಿತ್ತು ಗೊತ್ತಾ…”ಎನ್ನುತ್ತ ಮುದ್ದಾಡ ತೊಡಗಿದಳು. ಮೊದಲಿನಂತೆ ಹರ್ಷಚಿತ್ತಳಾದ ತಮ್ಮ ಮಗಳನ್ನು ಕಂಡ ಅವಳ ಪೋಷಕರು ನೆಮ್ಮದಿಯ ಉಸಿರು ಬಿಟ್ಟು,ಅವರೂ ಅವಳ ಸಂತಸದಲ್ಲಿ ಭಾಗಿಯಾದರು.

ಅಷ್ಟೇ ಅಲ್ಲ, ಅಂದಿನಿಂದ ಅದು ಅವರ ಮನೆ ಬಿಟ್ಟು ಹೋಗದ ರೀತಿ ಪ್ರೀತಿಯಿಂದ ಪೋಷಿಸತೊಡಗಿದರು.

Leave a Reply