Promise Photo by Tim Samuel from Pexels
Reading Time: 2 minutes

 ಶಪಥ (ಮಕ್ಕಳ ಕಥೆ)  

ಸೀತಾ ಗುಡ್ಡದ ಬುಡದಲ್ಲಿ ಒಂದು ಪುರಾತನ ಕಾಲದ ದೊಡ್ಡ ಆಲದ ಇತ್ತು.ಆ ಮರದ ಕೊಂಬೆಗಳ  ತುಂಬ ಅಲ್ಲಲ್ಲಿ ವಿಧ ವಿಧವಾದ ಪಕ್ಷಿಗಳು ಗೂಡು ಕಟ್ಟಿ ಕೊಂಡು ಮರಿಗಳೊಂದಿಗೆ ಸುಖವಾಗಿದ್ದವು.ಪಕ್ಷಿಗಳ ಆಕಾರಕ್ಕೆ ತಕ್ಕಂತೆ ಸಣ್ಣ ಹಾಗೂ ದೊಡ್ಡ ಮೊಟ್ಟೆಗಳು ಇದ್ದವು.ಆಗೊಮ್ಮೆ ಈಗೊಮ್ಮೆ ಆ  ಮರದಿಂದ

ಮೊಟ್ಟೆಗಳು,ಪುಟ್ಟ ಮರಿಗಳು ಕೆಳಕ್ಕೆ ಬೀಳುತ್ತಿದ್ದವು.ಇದನ್ನು ಮರದ ಮಗ್ಗುಲಿನ ಬಂಡೆಯ ಹಿಂದೆ ಅವಿತು ಕೊಂಡ ನರಿ ಜೊಲ್ಲು ಸುರಿಸುತ್ತ,ಸಮಯ ನೋಡಿ ಓಡಿ ಬಂದು ಕಬಳಿಸುತ್ತಿತ್ತು.ಆಗ ಅದರ ಕುಹಕ ಮನದಲ್ಲಿ”ಆಹ್ಹಾ… ಎಷ್ಟೊಂದು ರುಚಿಯಾಗಿವೆ…. ಹೇಗಾದರೂ ಮಾಡಿ ಅವುಗಳನ್ನು ಹೆಚ್ಚು ಹೆಚ್ಚಾಗಿ ತಿನ್ನಬೇಕೆಬ ಆಸೆ ಚಿಗುರಿತು.ಅದರ ಬೆನ್ನಲ್ಲೇ.. ಅಷ್ಟು ಎತ್ತರದ ಕೊಂಬೆಯ ತನಕ ತನಗೆ ಹೋಗಲಾಗುವುದಿದಲ್ಲವಲ್ಲ… ಏನು ಮಾಡುವುದು..?”ಎಂದು ಯೋಚಿಸು ತೊಡಗಿತು.ಆಗ ಅದರ ಕಣ್ಣಿಗೆ   ಪಕ್ಕದಲ್ಲೇ ತನ್ನ ಪಾಡಿಗೆ ತಾನು ಹರಿದು ಹೋಗುತ್ತಿದ್ದ ನಾಗರ ಹಾವು ಕಂಡಿತು.ತಕ್ಷಣ ಏನೋ ಹೊಳೆದಂತಾಗಿ ಆ ನರಿ

“ನಾಗಣ್ಣಾ…ನಾಗಣ್ಣಾ…ಬಾ ಇಲ್ಲಿ ನಿನಗೊಂದು ಸಂತೋಷದ ವಿಚಾರ ತಿಳಿಸಬೇಕಿದೆ”ಎಂದು ಕೂಗಿತು.ಅದರ ಧ್ವನಿ ಆಲಿಸಿದ ನಾಗಣ್ಣ ಹಿಂತಿರುಗಿ ತಲೆ ಎತ್ತಿ

“ಏನದು?”ಎಂದು ಪ್ರಶ್ನಿಸಿತು.ಆಗ ನರಿ ಆ ಆಲದ ಮರ ತೋರಿಸುತ್ತ”ನೋಡು..

ಆ ಮರದ ಕೊಂಬೆಗಳಲ್ಲಿ ಅನೇಕಾನೇಕ ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಗಳನ್ನು ಸಾಕುತ್ತಿವೆ.ನೀನಾದರೆ ಸುಲಭವಾಗಿ ಮರ ಏರಬಲ್ಲೆ.. ನಿಧಾನಕ್ಕೆ ಮರ ಏರಿ ನಿನಗೆ ತೃಪ್ತಿ ಆಗುವತನಕ ತಿಂದು ನನಗೂ ಕೆಳಕ್ಕೆ ಹಾಕು.., ನಾನು ಮರದ ಕೆಳಗೆ ನಿಂತು ನಿನಗೆ ಅಪಾಯ ಬಂದಾಗ ಸೂಚಿಸುವೆ”ಎಂದಿತು.ಅದರ ಮಾತಿಗೆ ಆಸೆ ಪಟ್ಟ ನಾಗಣ್ಣ “-ಹೌದಾ..?” ನನಗೆ ಗೊತ್ತೇ ಇರಲಿಲ್ಲ.. ಆಯ್ತು ನಾಳೆಯಿಂದ ನಮ್ಮ ಕಾರ್ಯ ಶುರುಮಾಡೋಣ “ಎಂದು  ಹೇಳಿತು.ಇವೆರಡೂ ಆಡುತ್ತಿದ್ದ ಮಾತುಗಳನ್ನು ಅದೇ ಬಂಡೆ ಮೇಲೆ ಕುಳಿತಿದ್ದ ಕಾಗಣ್ಣ ಕೇಳಿಸಿಕೊಂಡಿತ್ತು.ಆಗ ಅದರ ಮನದಲ್ಲಿ “ಛೇ..ಪಾಪ ಎಲ್ಲಿಂದಲೋ ಬಂದ ಪಕ್ಷಿಗಳಿಗೆ ಸುಖ ದಿಂದ ಇರಲು ಬಿಡುವುದಿಲ್ಲ ಈ ಪಾಪಿಗಳು “ಎಂದು ಬೇಸರಗೊಂಡು ಹೇಗಾದರೂ ಮಾಡಿ ಇದನ್ನು ತಪ್ಪಿಸುವ ಉದ್ದೇಶದಿಂದ ಹಾರಿ ಬಂದು ಪಕ್ಕದ ಪೊದೆಯಲ್ಲಿದ್ದ ಮೂರು ಮುಂಗುಸಿಗಳಿಗೆ ವಿಷಯ ತಿಳಿಸಿ ಸಹಾಯ ಮಾಡಲು ಕೋರಿತು.ಕಾಗೆ ಹೇಳಿದ ಸಂಕಟದ ಮಾತು ಆಲಿಸಿದ ಆ ಮುಂಗುಸಿಗಳು ಅದೇ ಕ್ಷಣ ಓಡಿ ಬಂದು ಯಾರಿಗೂ ಕಾಣದ ರೀತಿ ಒಂದೊಂದು ಕೊಂಬೆಯೊಳಗೆ ಅವಿತು ಕುಳಿತವು.

ಮರುದಿನ ನಾಗಣ್ಣ ತನ್ನ ನಾಲಿಗೆ ಚಾಚುತ್ತ, ಮರ ಏರಿ ಮೊದಲನೇಯ ಕೊಂಬೆಗೆ

ಬರುತ್ತಿದ್ದಂತೆ ಅಲ್ಲಿದ್ದ ಮುಂಗುಸಿ ಅದನ್ನು ಕಚ್ಚಲು ಮುಂದಾಯಿತು.ಅದರಿಂದ ತಪ್ಪಿಸಿಕೊಂಡು ನಾಗಣ್ಣ ಇನ್ನೊಂದು ಕೊಂಬೆಯ ಕಡೆ ಹೋದಾಗ,ಅಲ್ಲಿ ಅಡಗಿದ್ದ ಮುಂಗುಸಿ ಎಗರಿತು.ಈಗ ಕಕ್ಕಾಬಿಕ್ಕಿಯಾದ ನಾಗಣ್ಣ ಇನ್ನೂ ಮುಂದೆ ಹೊರಟಾಗ 

ಮೂರನೇಯ ಮುಂಗುಸಿ ಕಚ್ಚಲು ಧಾವಿಸಿ ಬಂದಿತು.ಕೊನೆಗೆ ಮೂರೂ ಮುಂಗುಸಿಗಳು ಸೇರಿ  ನಾಗಣ್ಣನಿಗೆ ಮನಬಂದಂತೆ ಕಚ್ಚತೊಡಗಿದವು.ಅವುಗಳ ಕಚ್ಚುವಿಕೆ ನೋವು ಸಹಿಸದೇ ನುಸುಳಲು ಮುಂದಾದಾಗ ನಾಗಣ್ಣ ಆಯ ತಪ್ಪಿ ಧೊಪ್ ಎಂದು ಮರದ ಕೆಳಗೆ ಬಿದ್ದು ಇನ್ನಷ್ಟು ಗಾಯಗೊಂಡಿತು.ಹಾಗೂಹೀಗೂ

ಅಲ್ಲಿಂದ ಮೆಲ್ಲಗೆ  ಕಾಡು ಸೇರಿತು.ಕೆಲ ಸಮಯದ ಬಳಿಕ ಅದಕ್ಕೆ”ನಾನು ನನ್ನ ಪಾಡಿಗಿದ್ದರೂ ಅನಾವಶ್ಯಕವಾಗಿ ನನ್ನ ನೋವಿಗೆ ಕಾರಣವಾದ ಆ ನರಿಗೆ ತಕ್ಕ ಬುದ್ದಿ ಕಲಿಸಬೇಕೆಂದು ಶಪಥ ಮಾಡಿತು.ಅದೇ  ಯೊಚನೆಯಲ್ಲಿ ಅದು ಹೇಗೋ ಮತ್ತೆ ನರಿಯ ಬಳಿ ಬಂದು”ನರಿಯಣ್ಣಾ… ನೀನು ಮೊಟ್ಟೆ-ಪಕ್ಷಿಯ ಮರಿ ವಿಚಾರ ಬಿಡು,

ಇಲ್ಲೇ ಪೊದೆಯ ಹಿಂಭಾಗ ಪುಟ್ಟ ಪುಟ್ಟ ಮೊಲಗಳು, ಜಿಂಕೆ ಮರಿ ಗಳು ಇವೆ ಎಲ್ಲವೂ ಮುದ್ದಾಗಿವೆ, ಅವುಗಳ ಸುತ್ತ ಮುತ್ತ ಯಾರೂ ಇಲ್ಲ”ಎಂದು ಹೇಳುತ್ತಿದ್ದಂತೆ ನರಿಯ ಬಾಯಲ್ಲಿ ನೀರೂರಲಾರಂಭಿಸಿತು.”ಬಾ..ತಡವೇಕೆ ಹೋಗೋಣ ಬಾ..”ಎಂದು ನಾಗಣ್ಣನಿಗೆ ಹೇಳಿದಾಗ ನಾಗಣ್ಣ”ಆತುರ ಮಾಡಬೇಡ ನಾನು ಕರೆದುಕೊಂಡು ಹೋಗುವ ದಾರಿಯಲ್ಲಿ ಬಂದರೆ ಮಾತ್ರ ನಿನಗವು.. ಲಭ್ಯ.ಎಂದಿತು. ನಾಗಣ್ಣ ಮೊದಲೇ ಸಿದ್ಧಪಡಿಸಿದಂತೆ ಮೂರು ಮರಗಳ ಪೊಟರೆಯೊಳಗೆ ಸಾಕಷ್ಟು ಮುಳ್ಳುಗಳನ್ನು  ತುಂಬಿತ್ತು.ಹೀಗಾಗಿ ನರಿಗೆ-

“ನೋಡು ನರಿಯಣ್ಣಾ ಈ ಪೊಟರೆ ಮೂಲಕ ಹೋದರೆ ಯಾರಿಗೂ ತಿಳಿಯದು..ಬಾ.. ನನ್ನನ್ನು ಅನುಸರಿಸು”ಎಂದು ತಾನು ಮುಂದೆ ಹೊರಟಿತು.ಆಸೆಬುರುಕ ನರಿ ಮೊದಲನೇಯ ಪೊಟರೆ ದಾಟುವಾಗ ಅದಕ್ಕೆ ಸ್ವಲ್ಪ ತರಚಿದಂತಾದರೂ ಮೊಲ, ಜಿಂಕೆ ತಿನ್ನುವ ಹಂಬಲದೆದರು ಅದು ಸಹಿಸಿ ಕೊಂಡಿತು.ಆದರೆ ಎರಡನೇಯ ಮೂರನೇಯ ಪೊಟರೆ ದಾಟಿ ಬರುವಷ್ಟರಲ್ಲಿ ಅದರ ಮುಖ ,ಮೈಕೈಗಳಿಗೆಲ್ಲ ಮೊನಚಾದ ಮುಳ್ಳು ಚುಚ್ಚಿದರ ಪರಿಣಾಮ  ವಿಪರೀತ ರಕ್ತ ಸ್ರಾವವಾಗಿ  ಅದು ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿತು.ಅದರ ಅವಸ್ಥೆ ಕಂಡ ನಾಗಣ್ಣ ತನ್ನ ಶಪಥ ಈಡೇರಿತೆಂದು ಕಿಲಕಿಲನೆ ನಗುತ್ತ  ತನ್ನ ಹಾದಿ ಹಿಡಿಯಿತು.

Leave a Reply