Site icon Chandamama

ನೀ… ನನಗಿದ್ದರೆ-ನಾ… ನಿನಗೆ (ಮಕ್ಕಳ ಕತೆ)

Elephant Photo by Magda Ehlers from Pexels
Reading Time: 2 minutes

ನೀ… ನನಗಿದ್ದರೆ-ನಾ… ನಿನಗೆ (ಮಕ್ಕಳ ಕತೆ)

ಮಸಲ ದೇಶದ ರಾಜ, ಅಪ್ರತಿಮ ಧೀರ,ಶೂರ ಮತ್ತು ಅಷ್ಟೇ ದಯಾಮಯನಾಗಿದ್ದ.ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.ಅದಲ್ಲದೇ ಆ ರಾಜ, ಸಾಧು ಪ್ರಾಣಿಗಳನ್ನೂ ಪ್ರೀತಿಸುತ್ತಿದ್ದ. ಅದಕ್ಕೆಂದೇ ಅರಮನೆಯ ಹಿಂಭಾಗದ , ತೋಟದ ಎಡ ಪಾರ್ಶ್ವ ದಲ್ಲಿ ಐದಾರು ಎಕರೆ ಜಮೀನನ್ನು ಮೀಸಲಿಟ್ಟು, ಅಲ್ಲಿ ಆನೆ, ಕುದುರೆ, ಒಂಟೆ, ಜಿಂಕೆ,ಮೊಲ, ನಾಯಿ, ಬೆಕ್ಕು,ಹಸು ಮುಂತಾದ ಪ್ರಾಣಿಗಳ ಜೊತೆಗೆ ಗಿಣಿ, ಪಾರಿವಾಳ, ನವಿಲು ಇತ್ಯಾದಿ ಪಕ್ಷಿಗಳನ್ನೂ ಸಾಕಿದ್ದ.

 ಎಲ್ಲ ರಾಜರಂತೆ,ಈ ರಾಜನೂ ಆಗಾಗ ತನ್ನ ಆಯ್ದ ರಕ್ಷಣಾ ದಳದವರೊಂದಿಗೆ ಹತ್ತಿರದ ಕಾಡಿಗೆ ಬೆಟೆಗಾಗಿ ಹೋಗುತ್ತಿದ್ದ.ಆ ಸಮಯದಲ್ಲಿ ಯಾವುದೇ ಸಾಧು ಪ್ರಾಣಿಗಳ ಮೇಲೆ ಬಲ ಪ್ರಯೋಗ ಮಾಡಕೂಡದೆಂದು ಕಟ್ಟುನಿಟ್ಟಾಗಿ ಸಂಗಡಿಗರಿಗೆ ಸೂಚಿಸಿದ್ದ. ಹೀಗೆ ಒಂದು ಬಾರಿ ಬೇಟೆಗೆ ಹೊರಟಿದ್ದ ರಾಜನಿಗೆ ಹೊತ್ತು ನೆತ್ತಿಏರುತ್ತ ಬಂದರೂ ಯಾವುದೇ ಬೇಟೆ ಸಿಗಲಿಲ್ಲ.

ಬೇಸರಗೊಳ್ಳದೇ ಆತ,ಹುಮ್ಮಸ್ಸಿನಿಂದ ಕಾಲ್ನಡಿಗೆಯಲ್ಲಿ ಹೋಗುತ್ತ ಹೋಗುತ್ತ ತನ್ನ ರಕ್ಷಣಾ ದಳದವರಿಂದ ಬೇರ್ಪಟ್ಟು ದಾರಿ ತಪ್ಪಿಸಿಕೊಂಡ.ತುಂಬಾ ದೂರ ನಡೆದು ಬಂದವ ವಿಶ್ರಾಂತಿಗಾಗಿ ಅಲ್ಲಿಯೇ ಇದ್ದ ವಿಶಾಲ ಮರದ ಬುಡದಲ್ಲಿಯ ಪುಟ್ಟ ಬಂಡೆಯ ಮೇಲೆ ಕುಳಿತ.ಆಶ್ಙರ್ಯ ಎಂಬಂತೆ ಆತ ,ಕುಳಿತ ಮರದ ಬಲ ಭಾಗದಲ್ಲಿಯೇ ಮಲಗಿದ್ದ ಭಾರೀ ಗಾತ್ರದ ಆನೆ ಎದ್ದು ನಿಂತಿತು.ಅದ ಕಂಡ ರಾಜ ಒಂದಿನಿತೂ ಹೆದರಲಿಲ್ಲ.ಏಕೆಂದರೆ ಆತ ಇಂತಹ ಐದಾರು ಆನೆಗಳನ್ನು ಸಾಕಿ ಸಲಹುತ್ತಿದ್ದ.

ಹೀಗಾಗಿ ಅವುಗಳ ಮನಸ್ಥಿತಿ ಚೆನ್ನಾಗಿ ಬಲ್ಲವನಾಗಿದ್ದ. ರಾಜ ನಿಧಾನವಾಗಿ ಆನೆಯ ಬಳಿಹೋದ.ಅದುಕೂಡ ಪರಿಚಿತನಂತೆ ಮಂಡಿಊರಿ ಕುಳಿತು, ಸೊಂಡಿಲು ಮೇಲೆತ್ತಿ ಗೌರವ ಸೂಚಿಸಿತು.ಇನ್ನೂ ಹತ್ತಿರ ಬಂದ ರಾಜ, ಮೆಲ್ಲಗೆ ಅದರ ಮೈ ದಡುವಿ ಮೃದುವಾಗಿ ಕಿವಿ, ಸೊಂಡಿಲು ಸವರುತ್ತ,ಅದರ ಕಣ್ಣುಗಳನ್ನು ನೋಡಿದ.ಎರಡೂ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು.

ಅದರ ವರ್ತನೆ ಗಮನಿಸಿದ ರಾಜ, ಆ ಆನೆ ತುಂಬಾ ದು:ಖದಲ್ಲಿದೆ ಎಂದರಿತ.ಎದ್ದು ನಿಂತ ಆನೆ ,ಪಕ್ಕದಲ್ಲಿದ್ದ ದೊಡ್ಡ ಗಾತ್ರದ ಬಂಡೆಯ ವರೆಗೆ ನಡೆದು ಹೋಗಿ,ಅದರ ಮಗ್ಗುಲಲ್ಲಿ ಇದ್ದ ಪುಟ್ಟ ಬಂಡೆಯನ್ನು ತನ್ನ ಸೊಂಡಿಲಿನಿಂದ ತೋರಿಸುತ್ತ ತನ್ನ ಭಾರೀ ಗಾತ್ರದ ತಲೆಯನ್ನು ಆಚೆ ಈಚೆ ತಿರುಗಿಸ ತೊಡಗಿತು.ಇದೇ ರೀತಿ ಐದಾರು ಬಾರಿ ಮಾಡಿದಾಗ ಕುಶಲಮತಿ ರಾಜ, ಈ ಆನೆ ತನ್ನ ಮರಿ ಕಳೆದು ಕೊಂಡು ದು:ಖಿಸುತ್ತಿದೆ ಎಂದರಿತ.

ಪುನಃ ಅದರ ಮೈ ದಡವಿ, ಕಳೆದು ಹೋದ ಮರಿ ಆನೆ ಹುಡುಕಲು ಮುಂದಾದ.ಅನತಿ ದೂರ ಹೋಗುವಷ್ಟರಲ್ಲಿ, ದಟ್ಟವಾಗಿ ಬೆಳೆದ ಮುಳ್ಳು ಗಂಟಿಗಳೊಳಗಿಂದ ಯಾವುದೋ ಪ್ರಾಣಿಯ ಆರ್ತ ನಾದ ಕೆಳಿಸಿಕೊಂಡು ಹತ್ತಿರ ಬಂದು ನೋಡಿದಾಗ, ತಾನು ಊಹಿಸಿದಂತೆ ಪುಟ್ಟ ಆನೆ ಮರಿಯೊಂದು ಕೆಸರಲಿ ಸಿಲುಕಿ ಹೊರಬರಲು ಶ್ರಮ ಪಡುತ್ತಿರುವುದು ಕಂಡ. ತಡಮಾಡದೇ ತನ್ನಲ್ಲಡಗಿದ ಉಪಾಯ ಬಳಸಿ ಅಂತೂ ಅದನ್ನು ಕೆಸರಿನಿಂದ ಮುಕ್ತ ಪಡಿಸಿ ,ಅದರ ತಾಯಿಯ ಎದುರು ತಂದು ನಿಲ್ಲಿಸುತ್ತಾನೆ.

ತನ್ನ ಮರಿ ಕಂಡೊಡನೆ ಆ ಆನೆ ಖುಷಿಯಿಂದ ಒಂದು ಸುತ್ತು ತಿರುಗಿ, ಮಂಡಿಯೂರಿ ಕುಳಿತು, ಸೊಂಡಿಲು ಎತ್ತಿ ರಾಜನಿಗೆ ಕೃತಜ್ಞತೆ ಸೂಚಿಸುತ್ತದೆ.ಅಷ್ಟೇ ಅಲ್ಲ, ಮರದ ಪೂಟರೆಯೊಳಗಿಟ್ಟಿದ್ದ ಬಾಳೆಹಣ್ಣಿನ ಗೊನೆ ತಂದು ರಾಜನ ಮುಂದಿಟ್ಟಿತು.ಆನೆಯ ಆನಂದ ಕಂಡ ರಾಜ,ಗೊನೆಯಿಂದ ಐದಾರು ಹಣ್ಣು ಕಿತ್ತಿ, ಮರಿ ಆನೆಗೆ ತಿನಿಸಿ,ತಾನೂ ತಿಂದು ಆನೆಗೆ ಕೈ ಮುಗಿದು ಮುಂದೆ ಸಾಗಿದ. ಹೀಗೆ ಸಾಗುವಾಗ, ರಾಜನಿಗೆ ಬಾಯಾರಿಕೆ ಆಯಿತು.ಹತ್ತಿರದಲ್ಲೇ ಜುಳು-ಜುಳು, ಹರಿಯುವ ತೊರೆಯತ್ತ ಬಂದು, ಬೊಗಸೆ ತುಂಬ ನೀರು ಹಿಡಿದು, ಇನ್ನೇನೂ ಕುಡಿಯಬೇಕೆನ್ನುವಷ್ಟರಲ್ಲಿ, ಹಿಂಬದಿಯಿಂದ ಕಿವಿ ಗಡಚಿಕ್ಕುವ ಘೋರ ಶಬ್ದ ಆಲಿಸಿದವ ತಿರುಗಿ ನೋಡಿದ.!

ಬೆಟ್ಟದಿಂದ ಬ್ರಹದಾಕಾರದ ಬಂಡೆಗಳು ಒಂದರ ಹಿಂದೆ ಒಂದರಂತೆ ಅವನಿದ್ದ ಕಡೆ ಉರುಳಿ ಬರುತ್ತಿದ್ದವು.ಅದರಿಂದ ತಪ್ಪಿಸಿಕೊಂಡು ಓಡಲು ಅನುವಾದಾಗ, ತೊರೆಯ ಕಿನಾರೆ ಮರಳಲ್ಲಿ ಮಲಗಿದ್ದ ದೊಡ್ಡ ಗಾತ್ರದ ಮೊಸಳೆ, ಸದ್ದಿಲ್ಲದೇ ರಾಜನ ಕಾಲು ಹಿಡಿಯಲು ಓಡಿ ಬರುತ್ತಿತ್ತು.ಇದು ರಾಜನ ಗಮನಕ್ಕೆ ಬಂದಿರಲಿಲ್ಲ, ಏಕೆಂದರೆ ಆತನಿಗೆ ಉರುಳಿ ಬರುತ್ತಿದ್ದ ಬಂಡೆಗಳಿಂದ ಬಚಾವಾದರೆ ಸಾಕಿತ್ತು.ಆಗ ರಾಜನ ಅದೃಷ್ಟ ವೇನೋ ಎಂಬಂತೆ, ಅದೇ ದಾರಿಯಲ್ಲಿ ಮರಿಯೊಂದಿಗೆ ಬರುತ್ತಿದ್ದ ಆ ಆನೆ, ಮೊಸಳೆಯ ಹುನ್ನಾರ ಅರಿತು ಕೋಪಾವೇಶದಿಂದ ಓಡಿಬಂದು ತನ್ನ ಸೊಂಡಿಲಲ್ಲಿ ಅದರ ಬಾಲ ಸುತ್ತಿಕೊಂಡು ಜೋರಾಗಿ ಎತ್ತರಕೆ ಎಸೆಯಿತು.

ಆ ಮೊಸಳೆ ನೆಲಕ್ಕೆ ಬೀಳುವುದಕ್ಕೂ ಅದರ ಮೇಲೆ ದೊಡ್ಡ ಗಾತ್ರದ ಬಂಡೆ ಬೀಳುವುದಕ್ಕೂ ಸಮ ಆಗಿ ಅದು ಅಲ್ಲೇ ಪ್ರಾಣ ಬಿಟ್ಟಿತು.ಓಡುತ್ತಿದ್ದ ರಾಜ ಒಮ್ಮೆ ಹಿಂತಿರುಗಿ ನೋಡಿದ..!ಅರ್ರೇ.. ಅದೇ ಆನೆ, ಮತ್ತು ಅದರ ಮರಿ ಸೊಂಡಿಲೆತ್ತಿ ನಮಿಸುತ್ತಿದ್ದವು. ರಾಜ,ತನ್ನ ಪ್ರಾಣಿ ಉಳಿಸಿದ ಅವುಗಳತ್ತ ನಮೃತೆಯಿಂದ ಕೈ ಜೋಡಿಸಿ ನಿಂತ.ಆಗ ಆನೆಯ ನೋಡುವ ನೋಟ “ನೀ ನನಗಿದ್ದರೆ,ನಾ ನಿನಗೆ”ಎಂಬಂತಿತ್ತು.

Exit mobile version